ಸಹಾಯಕ ಪ್ರಾಧ್ಯಾಪಕ ಆಕಾಂಕ್ಷಿಗಳ ಕನಸು ಭಗ್ನ...?

ಸಹಾಯಕ ಪ್ರಾಧ್ಯಾಪಕ ಆಕಾಂಕ್ಷಿಗಳ ಕನಸು ಭಗ್ನ...?

 ಸಹಾಯಕ ಪ್ರಾಧ್ಯಾಪಕರಾಗಬೇಕೆಂದು ಹಗಲಿರುಳು ಕಷ್ಟಪಟ್ಟು ಓದಿದ ರಾಜ್ಯದ ಒಂದು ಲಕ್ಷ ಅಭ್ಯರ್ಥಿಗಳ ಕನಸಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊಸ ನಿಯಮ ಜಾರಿ ತರುವ ಮೂಲಕ ತಣ್ಣೀರು ಎರಚಿದೆ! ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಒಂದೇ ವಿಷಯವನ್ನು ವ್ಯಾಸಂಗ ಮಾಡಿದವರು ಮಾತ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂಬುದೇ ಹೊಸ ನಿಯಮವಾಗಿದ್ದು, ಇದರಿಂದ ಅಭ್ಯರ್ಥಿಗಳಿಗೆ ಸಮಸ್ಯೆಯಾಗಿದೆ.


ಈವರೆಗೆ ಪದವಿಯಲ್ಲಿ ಯಾವುದೇ ವಿಷಯ ಓದಿದ್ದರೂ ಸ್ನಾತಕೋತ್ತರದಲ್ಲಿ ಅಭ್ಯಾಸ ಮಾಡಿದ ವಿಷಯದ ಆಧಾರದ ಮೇಲೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ನೆಟ್), ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆಸೆಟ್) ಅಥವಾ ಪಿಎಚ್.ಡಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತಿತ್ತು. ಇನ್ಮುಂದೆ ಅದಕ್ಕೆ ಬ್ರೇಕ್ ಬೀಳಲಿದೆ.


2 ತಿಂಗಳ ಹಿಂದೆ 1242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಆ ವೇಳೆ ಹೊಸ ನಿಯಮದ ಪ್ರಸ್ತಾಪ ಇರಲಿಲ್ಲ. ಸಾಕಷ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ, ಕೊನೆಯ ದಿನಾಂಕಕ್ಕೆ ಎರಡು ದಿನ ಬಾಕಿ ಇರುವಂತೆ ಹೊಸ ನಿಯಮದ ಆದೇಶ ಪ್ರತಿಯನ್ನು ವೈಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಅಧಿಸೂಚನೆಯನ್ನು ಅ.7ರಂದು ಹೊರಡಿಸಲಾಗಿತ್ತು. ಮೊದಲು ನ.6ರವರೆಗೆ ಅರ್ಜಿ ಅವಧಿ ಇತ್ತು. ಆನಂತರ ಕೆಸೆಟ್ ಫಲಿತಾಂಶ ಬಂದಿದ್ದರಿಂದ ಅರ್ಜಿ ಅವಧಿಯನ್ನು ನ.20ರವರೆಗೆ ವಿಸ್ತರಿಸಲಾಗಿತ್ತು. ಆದರೆ, ನ.18ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊಸ ನಿಯಮ ಜಾರಿಗೊಳಿಸಿರುವ ಕುರಿತು ವೈಬ್​ಸೈಟ್​ನಲ್ಲಿ ಆದೇಶ ಪ್ರತಿ ಬಿಡುಗಡೆಗೊಳಿಸಿತು. ನಂತರ ಅರ್ಜಿ ಸಲ್ಲಿಸುವ ಅವಧಿಯನ್ನು ನ.30ರವರೆಗೆ ವಿಸ್ತರಣೆ ಮಾಡಲಾಗಿತ್ತು.


ಅಭ್ಯರ್ಥಿಗಳ ಆಕ್ರೋಶ: ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯದಲ್ಲಿ ಓದಲು ಅವಕಾಶವಿದೆ. ಆದರೆ, ನೇಮಕಾತಿಗೆ ಮಾತ್ರ ಒಂದೇ ವಿಷಯ ಅಭ್ಯಾಸ ಮಾಡಿರಬೇಕು ಎಂದು ಹೊಸ ನಿಯಮ ತಂದಿದ್ದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೊಸ ನಿಯಮದಿಂದ ನೆಟ್, ಕೆಸೆಟ್, ಪಿಎಚ್.ಡಿ ಮಾಡಿದ್ದರೂ ಉಪಯೋಗವಿಲ್ಲ. ಓದಲು ಅನುಕೂಲ ನೀಡಿ, ಉದ್ಯೋಗಕ್ಕೆ ಮಾತ್ರ ಅವಕಾಶ ಕಿತ್ತುಕೊಂಡಿರುವ ಕ್ರಮ ಸರಿಯಲ್ಲ ಎಂಬುದು ಅಭ್ಯರ್ಥಿಗಳ ವಾದ.


ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಬೇರೆ ಬೇರೆ ವಿಷಯ ಅಧ್ಯಯನ ಮಾಡಿದವರು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ ಎಂಬ ನಿಯಮ ರೂಪಿಸಲಾಗಿದೆ. ಅರ್ಜಿ ಹಾಕಲು 2 ದಿನ ಬಾಕಿಯಿದ್ದಾಗ ಈ ನಿಯಮವನ್ನು ವೈಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಹೀಗಾದರೆ ನಮ್ಮ ಮುಂದಿನ ಭವಿಷ್ಯ ಹೇಗೆ?


| ರಮೇಶ ನೊಂದ ಅಭ್ಯರ್ಥಿ ಹೊಸಪೇಟೆ


ಅತ್ತ ಅವಕಾಶವಿಲ್ಲ, ಇತ್ತ ಹಣವೂ ಇಲ್ಲ..: ಸಾಮಾನ್ಯ ವರ್ಗದವರು 2 ಸಾವಿರ ರೂ., ಎಸ್​ಸಿ-ಎಸ್​ಟಿಗೆ ಸೇರಿದವರು 1 ಸಾವಿರ ರೂ. ಶುಲ್ಕ ಪಾವತಿಸಿದ್ದಾರೆ. ಅತ್ತ ಉದ್ಯೋಗಾವಕಾಶವೂ ಇಲ್ಲ, ಇತ್ತ ಅರ್ಜಿ ಹಣವೂ ಇಲ್ಲ ಎಂಬಂತಾಗಿದೆ. ಕೂಡಲೇ ಉನ್ನತ ಶಿಕ್ಷಣ ಇಲಾಖೆ, ನಿಯಮ ಮಾರ್ಪಾಡು ಮಾಡಬೇಕು ಎಂಬುದು ಅಭ್ಯರ್ಥಿಗಳ ಆಗ್ರಹ.

Post a Comment

0 Comments