ಈ ವರೆಗೆ ಬಿ.ಎ. ಅಥವಾ ಬಿ.ಎಸ್ಸಿ ಪದವಿಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಯಾವುದಾದರೂ ಮೂರು ವಿಷಯಗಳನ್ನು ಆಯ್ಕೆ ಮಾಡಿ ತಮ್ಮ ಪದವಿ ತರಗತಿಯ ಮೂರು ವರ್ಷ ಅಧ್ಯಯನ ಮಾಡಿ ಪದವಿ ಪಡೆದು ನಿರ್ಗಮಿಸಬೇಕಾಗಿತ್ತು. ಅದೆಷ್ತೋ ಬಾರಿ ವಿದ್ಯಾರ್ಥಿಗಳಿಗೆ ತಾವು ಕಲಿಯುತ್ತಿರುವ ಒಂದು ಅಥವಾ ಎರಡು ವಿಷಯಗಳಲ್ಲಿ ಮಾತ್ರವೇ ಆಸಕ್ತಿಯಿದ್ದರೂ ಅನಿವಾರ್ಯವಾಗಿ ಮೂರೂ ವಿಷಯಗಳನ್ನು ಕಲಿಯಬೇಕಾಗಿತ್ತು. ಇದಲ್ಲದೆ ಅನಿವಾರ್ಯ ಕಾರಣಗಳಿಂದ ಒಂದು ಅಥವಾ ಎರಡು ವರ್ಷದ ನಂತರ ಪದವಿ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದಿದ್ದರೆ ಆ ವಿದ್ಯಾರ್ಥಿಗೆ ಶಾಶ್ವತವಾಗಿ ‘ಪದವಿ ಪೂರ್ಣ ಮಾಡದಾತ’ನೆಂಬ ಹಣೆ ಪಟ್ಟಿ ಬರುತ್ತಿತ್ತು. ಪ್ರಾಯಶ: ಕರ್ನಾಟಕ ಸರಕಾರ ಈ ಶೈಕ್ಷಣಿಕ ವರ್ಷದಿಂದ ನೂತನ ಶಿಕ್ಷಣ ನೀತಿಯಡಿಯಲ್ಲಿ ಪದವಿ ಶಿಕ್ಷಣಕ್ಕೆ ನೀಡಿರುವ ಹೊಸ ನೀತಿ ನಿಯಮಗಳು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತಂದು ಶಿಕ್ಷಣವನ್ನು ವಿದ್ಯಾರ್ಥಿ ಕೇಂದ್ರಿತವಾಗಿ ಬದಲಾಯಿಸಬಹುದೆಂಬ ನಿರೀಕ್ಷೆ ಇದೆ. ಇದಲ್ಲದೆ ಅನಿವಾರ್ಯ ಕಾರಣಗಳಿಂದ ಒಮ್ಮೆ ಪದವಿ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಗಿ ಬಂದ ವಿದ್ಯಾರ್ಥಿ ತನಗೆ ಅನುಕೂಲವಾದಾಗ ವಿದ್ಯಾಭ್ಯಾಸವನ್ನು ಮುಂದುವರಿಸಲು ಹಾಗೂ ಯಾವುದೇ ಕಾರಣಕ್ಕಾಗಿ ಒಂದು ವಿಶ್ವವಿದ್ಯಾಲಯದ ವ್ಯಾಪ್ತಿಯಿಂದ ಇನ್ನೊಂದು ವಿಶ್ವವಿದ್ಯಾಲಯದ ವ್ಯಾಪ್ತಿಗೆ ವರ್ಗಾವಣೆ ಮಾಡುವುದಕ್ಕೂ ನೂತನ ವ್ಯವಸ್ಥೆ ಅವಕಾಶ ಕಲ್ಪಿಸಿಕೊಡುತ್ತದೆ.
*ಹೊಸ ವ್ಯವಸ್ಥೆಯಲ್ಲಿ ಪದವಿ ಶಿಕ್ಷಣ ಹೇಗಿರುತ್ತದೆ?*
ಪದವಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿ ಸೂಚಿಸಿದ ಉದ್ದೇಶದಂತೆ ಪ್ರಥಮ ವರ್ಷದಿಂದಲೇ ತನಗೆ ಆಸಕ್ತಿಯಿರುವ ವಿಷಯವನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಬಿ.ಎ. ಅಥವಾ ಬಿ.ಎಸ್ಸಿ ಪದವಿ ಅಧ್ಯಯನಕ್ಕೆ ಕಾಲೇಜಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ಎರಡು ವಿಷಯಗಳನ್ನು ಆಯ್ಕೆ ಕೊಳ್ಳಬೇಕಾಗುತ್ತದೆ. ಈ ವಿಷಯವನ್ನಷ್ಟೇ ವಿದ್ಯಾರ್ಥಿಯು ಮೂರು ವರ್ಷಗಳಲ್ಲಿ ಕಲಿಯಬೇಕಾಗುತ್ತದೆ. ಇದನ್ನು ಪ್ರಧಾನ ವಿಷಯ ಅಥವಾ ಡಿಸಿಪ್ಲಿನ್ ಕೋರ್ (Discipline Core) ಎಂದು ಕರೆಯಲಾಗುತ್ತದೆ.( ಬಿ.ಕಾಂ, ಬಿ.ಸಿ.ಎ. ಬಿ.ಬಿ. ಎ. ಮೊದಲಾದ ತರಗತಿಗಳ ವಿದ್ಯಾರ್ಥಿಗಳು ಮೂರು ಪ್ರಧಾನ ವಿಷಯಗಳನ್ನು ಕಲಿಯಬೇಕಾಗಿದ್ದು ಅವು ಪೂರ್ವ ನಿರ್ಧರಿತವಾಗಿರುತ್ತವೆ.)
ಪ್ರಧಾನ ವಿಷಯವಲ್ಲದೆ ಜತೆಗೆ ವಿದ್ಯಾರ್ಥಿಯು ತನಗೆ ಆಸಕ್ತಿಯಿರುವ ಇನ್ನಾವುದೇ ವಿಷಯವೊಂದನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಈ ವಿಷಯವನ್ನು ಓಪನ್ ಇಲೆಕ್ಟಿವ್ (Open Elective) ಎಂದು ಕರೆಯಲಾಗುತ್ತಿದ್ದು ಇದು ಪ್ರಧಾನ ವಿಷಯಕ್ಕೆ (Discipline Core) ಏನೇನೂ ಸಂಬಂಧವಿಲ್ಲದೆಯೂ ಇರಬಹುದು. ಉದಾಹರಣೆಗೆ ಒಬ್ಬ ವಿದ್ಯಾರ್ಥಿಯು ಭೌತ ವಿಜ್ಞಾನ ಮತ್ತು ಗಣಿತವನ್ನು ಪ್ರಧಾನ ವಿಷಯಗಳಾಗಿ ಆಯ್ಕೆ ಮಾಡಿಕೊಂಡು ಇದರ ಜತೆಗೆ ತಾನು ಪ್ರವೇಶ ಬಯಸುವ ಕಾಲೇಜು ನೀಡುತ್ತಿರುವ ಸಂಗೀತಕ್ಕೆ ಸಂಬಂಧಪಟ್ಟ ವಿಷಯವನ್ನೋ, ಭಾರತದ ಚರಿತ್ರೆಯನ್ನೋ, ಅಥವಾ ಜೀವ ವಿಜ್ಞಾನವನ್ನೋ ಓಪನ್ ಇಲೆಕ್ಟಿವ್ ಆಗಿ ಕಲಿಯಬಹುದು. ಇದಲ್ಲದೆ ಪ್ರತಿಯೊಂದು ಸೆಮಿಸ್ಟರುಗಳಲ್ಲಿಯೂ ಅವರು ಬೇರೆ ಬೇರೆ ವಿಷಯವನ್ನು ಓಪನ್ ಇಲೆಕ್ಟಿವ್ ಆಗಿ ಕಲಿಯಬಹುದು. ಈ ವ್ಯವಸ್ಥೆಯೇ ನೂತನ ಶಿಕ್ಷಣ ನೀತಿಯ ಪ್ರಧಾನ ಆಕರ್ಷಣೆ. ಇದರಿಂದಾಗಿ ವಿದ್ಯಾರ್ಥಿಯು ತನ್ನ ಪದವಿ ಪೂರೈಸುವ ಸಮಯದಲ್ಲಿ ತನ್ನ ಆಸಕ್ತಿಯ ಅನೇಕ ವಿಷಯಗಳನ್ನು ಕಲಿಯಲು ಅವಕಾಶ ಕಲ್ಪಿಸಿದಂತಾಗುತ್ತದೆ.
ಭಾಷೆಯ ವಿಷಯಕ್ಕೆ ಬಂದರೆ ಈ ವರೆಗೆ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ವರ್ಷಗಳಲ್ಲಿ ಇಂಗ್ಳೀಷ್ ಕಡ್ಡಾಯವಾಗಿ ಆಯ್ಕೆ ಮಾಡಿಕೊಂಡು ಇದರ ಜತೆಯಲ್ಲಿ ವಿದ್ಯಾರ್ಥಿಯ ಆಯ್ಕೆಯ ಇನ್ನಾವುದೇ ಭಾಷೆಯನ್ನು ಕಲಿಯಲು ಅವಕಾಶ ನೀಡಲಾಗುತ್ತಿತ್ತು. ಈ ಶೈಕ್ಷಣಿಕ ವರ್ಷದಿಂದ ಇದರಲ್ಲಿ ಮಾರ್ಪಾಟಾಗಿದ್ದು ವಿದ್ಯಾರ್ಥಿಗಳು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕಾಗಿದ್ದು ಇದರ ಜತೆಯಲ್ಲಿ ತಮ್ಮ ಆಯ್ಕೆಯ ಇನ್ನಾವುದೇ ಭಾಷೆಯನ್ನು ಕಲಿಯಲು ಅವಕಾಶ ನೀಡಲಾಗಿದೆ.(ಈ ವಿಷಯದ ಬಗೆಗೆ ಸಾಕಷ್ಟು ಚರ್ಚೆಗಳಾಗುತ್ತಿವೆ.) ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಮತ್ತು ಪದವಿಯ ವರೆಗಿನ ಯಾವುದೇ ತರಗತಿಗಳಲ್ಲಿ ಕನ್ನಡವನ್ನು ಕಲಿಯದ ಇದರಲ್ಲಿ ವಿನಾಯಿತಿ ನೀಡಲಾಗಿದ್ದು ಅವರುಗಳು ಒಂದು ಸೆಮಿಸ್ಟರ್ ಅವಧಿಯಲ್ಲಿ ವ್ಯಾವಹಾರಿಕ ಕನ್ನಡ ಕಲಿತು ಉಳಿದ ಸೆಮಿಸ್ಟರುಗಳಲ್ಲಿ ತಮ್ಮ ಆಯ್ಕೆಯ ಭಾಷೆಯನ್ನು ಕಲಿಯಬಹುದಾಗಿದೆ.
ಡಿಸಿಪ್ಲಿನ್ ಕೋರ್, ಓಪನ್ ಇಲೆಕ್ಟಿವ್ ಕನ್ನಡ ಸಹಿತ ಎರಡು ಭಾಷಾ ವಿಷಯಗಳಲ್ಲದೆ ವಿದ್ಯಾರ್ಥಿಗಳು . ದೈಹಿಕ ಶಿಕ್ಷಣ, ಶಾರೀರಿಕ ಸ್ವಾಸ್ಥ್ಯ ಮತ್ತು ಡಿಜಿಟಲ್ ಫ್ಲುಯೆನ್ಸಿ ಎಂಬ ವಿಷಯಗಳನ್ನು ಕಡ್ಡಾಯವಾಗಿ ಕಲಿಯಬೇಕಾಗುತ್ತದೆ. ಎಲ್ಲವನ್ನೂ ಸೇರಿಸಿ ಪ್ರಥಮ ಸೆಮಿಸ್ಟರಿಗೆ 25 ಕ್ರೆಡಿಟ್ ಎಂದು ನಿಗದಿ ಮಾಡಲಾಗಿದೆ. (ವಾರಕ್ಕೆ ಒಂದು ಘಂಟೆಯಂತೆ ನಾಲ್ಕು ತಿಂಗಳುಗಳ ಬೋಧನಾ ಅವಧಿಗೆ ಒಂದು ಕ್ರೆಡಿಟ್ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿ ವಾರಕ್ಕೆ ಎರಡು ಘಂಟೆಗಳ ಪ್ರಾಯೋಗಿಕ ತರಬೇತಿಗೆ ಒಂದು ಕ್ರೆಡಿಟ್ ಎಂದು ಪರಿಗಣಿಸಲಾಗುತ್ತದೆ). ಅಂದ ಹಾಗೆ ಪ್ರತಿ ಸೆಮಿಸ್ಟರುಗಳಲ್ಲಿಯೂ ಕಲಿಯಬೇಕಾದ ವಿಷಯಗಳನ್ನು ವಿವಿಧ ಭಾಗಗಳನ್ನಾಗಿ ವರ್ಗೀಕರಿಸಲಾಗಿದೆ. ಉದಾಹರಣೆಗೆ ಬಾಷಾ ವಿಷಯಗಳನ್ನು ವಿದ್ಯಾರ್ಥಿಯ ಸಂವಹನದ ಸಾಮರ್ಥ್ಯವನ್ನು ಅಭಿವೃದ್ದಿಮಾಡುವುದರಿಂದ ಇವುಗಳನ್ನು Ability Enhancement courses ಎಂದು ಕರೆಯಲಾಗುತ್ತದೆ.ಇದೇ ರೀತಿಯಲ್ಲಿ . ದೈಹಿಕ ಶಿಕ್ಷಣ, ಶಾರೀರಿಕ ಸ್ವಾಸ್ಥ್ಯ ಮತ್ತು ಡಿಜಿಟಲ್ ಫ್ಲುಯೆನ್ಸಿ ಮೊದಲಾದ ವಿಷಯಗಳು ವಿದ್ಯಾರ್ಥಿಯ ಕೌಶಲವನ್ನು ಅಭಿವೃದ್ದಿ ಮಾಡುವ ವಿಷಯಗಳಾಗಿದ್ದು ಇವುಗಳನ್ನು ಕೌಶಲಾಭಿವೃದ್ದಿ ಕೋರ್ಸುಗಳೆಂದು ( skill Enhancement course) ಎಂದು ಕರೆಯಲಾಗುತ್ತದೆ. ಸರ್ವೇ ಸಾಧಾರಣವಾಗಿ ಡಿಸಿಪ್ಲಿನ್ ಕೋರ್ ವಿಷಯಗಳಿಗೆ ಪ್ರತಿಯೊಂದು ಸೆಮಿಸ್ಟರಿನಲ್ಲಿಯೂ 6 ಕ್ರೆಡಿಟುಗಳು, ಓಪನ್ ಇಲೆಕ್ಟಿವ್ ವಿಷಯಗಳಿಗೆ 3 ಕ್ರೆಡಿಟ್, Ability Enhancement courses ಗಳಿಗೆ 6 ಕ್ರೆಡಿಟ್, ಮತ್ತು skill Enhancement course ಕೋರ್ಸುಗಳಿಗೆ 4 ಕ್ರೆಡಿಟುಗಳಂತೆ ವರ್ಗೀಕರಿಸಲಾಗಿದೆ.
ಎರಡನೆಯ ಸೆಮಿಸ್ಟರ್ ನಲ್ಲಿಯೂ ಇದೇ ಕ್ರಮ ಮುಂದುವರಿಯಲಿದ್ದು ಡಿಜಿಟಲ್ ಫ್ಲುಯೆನ್ಸಿ ವಿಷಯದ ಬದಲಾಗಿ ಪರಿಸರ ವಿಜ್ಞಾನವನ್ನೂ ,ಶಾರೀರಿಕ ಸ್ವಾಸ್ಥ್ಯ ವಿಷಯದ ಬದಲಾಗಿ ಯನ್. ಸಿ.ಸಿ, ಯನ್, ಯಸ್.ಯಸ್ ಅಥವಾ ಇನ್ನಾವುದೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಅನಿವಾರ್ಯ ಕಾರಣಗಳಿಂದ ವಿದ್ಯಾರ್ಥಿಗೆ ವಿದ್ಯಾಭ್ಯಾಸವನ್ನು ಮುಂದುವರಿಸಲು ಅಸಾಧ್ಯವಾದರೆ ಒಂದನೆಯ ವರ್ಷದ ಕೊನೆಯ ಪರೀಕ್ಷೆಯ ನಂತರ ಸರ್ಟಿಫಿಕೇಟು ಪಡೆದುಕೊಂಡು ನಿರ್ಗಮಿಸುವ ಅವಕಾಶ ನೀಡಲಾಗಿದೆ. ಮುಂದೆ ವಿದ್ಯಾರ್ಥಿಯ ಎರಡನೆಯ ವರ್ಷದ ಪದವಿ ತರಗತಿಯಲ್ಲಿಯೂ ಬಹುತೇಕ ಇದೇ ಕ್ರಮದಲ್ಲಿಯೇ ಮುಂದುವರಿಯಲಿದ್ದು ಮೂರನೆಯ ಸೆಮಿಸ್ಟರಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ನಾಲ್ಕನೆಯ ಸೆಮಿಸ್ಟರಿನಲ್ಲಿ ಬಾರತದ ಸಂವಿಧಾನವನ್ನು ಬಾಷಾ ವಿಷಯದ ಜತೆಗೆ ability Enhancement course ಆಗಿ ನೀಡಲಾಗುವುದು. ವಿದ್ಯಾರ್ಥಿಯು ಎರಡನೇ ವರ್ಷದ ಅಧ್ಯಯನವನ್ನು ಪೂರೈಸಿ ಡಿಪ್ಲೊಮದೊಂದಿಗೆ ನಿರ್ಗಮಿಸುವ ಅವಕಾಶ ಕಲ್ಪಿಸಲಾಗಿದೆ ಮತ್ತು ಈಗಾಗಲೇ ತಿಳಿಸಿದಂತೆ ತನಗೆ ಅವಕಾಶ ದೊರೆತಾಗ ವಿದ್ಯಾಭ್ಯಾಸವನ್ನು ಮುಂದುವರಿಸುವ ಅವಕಾಶವನ್ನೂ ನೀಡಲಾಗುತ್ತದೆ.
ಮೂರನೆಯ ವರ್ಷಕ್ಕೆ ತಲುಪಿದಾಗ ವಿದ್ಯಾರ್ಥಿಯು ತಾನು ಆಯ್ಕೆ ಮಾಡಿಕೊಂಡ ಎರಡು ವಿಷಯಗಳಲ್ಲಿ ಒಂದನ್ನು ಮೇಜರ್ ಆಗಿಯೂ ಇನ್ನೊಂದನ್ನು ಮೈನರ್ ಆಗಿಯೂ ಆಯ್ಕೆ ಮಾಡಬೇಕಾಗುತ್ತದೆ. ಮೇಜರ್ ವಿಷಯಕ್ಕೆ ಹತ್ತು ಕ್ರೆಡಿಟುಗಳನ್ನೂ ಮೈನರ್ ವಿಷಯಕ್ಕೆ ಐದು ಕ್ರೆಡಿಟುಗಳಾಗಿಯೂ ನಿಗದಿಪಡಿಸಲಾಗಿದ್ದು, ಭಾಷಾ ವಿಷಯದ ಬದಲಾಗಿ ವೃತ್ತಿ ತರಬೇತಿಗೆ ಸಂಬಂಧಪಟ್ಟ ಕೋರ್ಸುಗಳನ್ನು ability enhancement course ಆಗಿಯೂ ಸೈಬರ್ ಸೆಕ್ಯುರಿಟಿ ಅಥವಾ ವೃತ್ತಿಪರ ಸಂವಹನವನ್ನು ಕೌಶಲಾಭಿವೃದ್ದಿ ಕೋರ್ಸು ಆಗಿಯೂ ನೀಡಲಾಗುತ್ತದೆ. ಒಟ್ಟು ಮೂರು ವರ್ಷದ ಅಧ್ಯಯ ನದಲ್ಲಿ 142 ಕ್ರೆಡಿಟುಗಳನ್ನು ಗಳಿಸಿ ವಿದ್ಯಾರ್ಥಿಯು ಪದವಿ ಗಳಿಸಿ ನಿರ್ಗಮಿಸಬಹುದು.
ನಾಲ್ಕನೆಯ ವರ್ಷಕ್ಕೆ ಬಂದಾಗ ವಿದ್ಯಾರ್ಥಿಯು ತಾನು ಮೂರನೆಯ ವರ್ಷದ ಪದವಿ ತರಗತಿಯಲ್ಲಿ ಮೇಜರ್ ಆಗಿ ಅಧ್ಯಯನ ಮಾಡಿದ ವಿಷಯ ಇನ್ನೂ ಹೆಚ್ಚು ಆಳವಾಗಿ ಅದ್ಯಯನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಡಿಸಿಪ್ಲಿನ್ ಕೋರ್ ವಿಷಯದ ಜತೆಯಲ್ಲಿ ಹಿಂದಿನ ಮೂರು ವರ್ಷಗಳ ಕಾಲ ವಿದ್ಯಾರ್ಥಿಯು ಅಧ್ಯಯನ ಮಾಡುತ್ತಿದ್ದ ವಿವಿಧ ಓಪನ್ ಇಲೆಕ್ಟಿವ್ ಗಳ ಬದಲಾಗಿ ಆತನು ತನ್ನ ಡಿಸಿಪ್ಲಿನ್ ಕೋರ್ ವಿಷಯಕ್ಕೆ ಸಂಬಂಧಪಟ್ಟ ಡಿಸಿಪ್ಲಿನ್ ಸ್ಪೆಸಿಫಿಕ್ ಇಲೆಕ್ಟಿವ್ ವಿಷಯಗಳನ್ನು ಅಧ್ಯಯನ ಮಾಡಿ ತನ್ನ ಆಯ್ಕೆಯ ಪ್ರಧಾನ ವಿಷಯದ ಒಂದು ಶಾಖೆಯಲ್ಲಿ ಹೆಚ್ಚಿನ ಪರಿಣಿತಿಯನ್ನು ಪಡೆಯುವುದಕ್ಕೆ ಅವಕಾಶ ನೀಡಲಾಗುತ್ತದೆ. ನಾಲ್ಕನೆಯ ವರ್ಷದ ಅಧ್ಯಯನ ಸಂಪೂರ್ಣಗೊಂಡಾಗ ವಿದ್ಯಾರ್ಥಿಗೆ 184 ಕ್ರೆಡಿಟುಗಳು ಲಭಿಸಲಿದ್ದು ಸ್ನಾತಕ ಹಾನರ್ಸ್ ಪದವಿ ನೀಡಲಾಗುವುದು. ನಾಲ್ಕನೇ ವರ್ಷದಲ್ಲಿ ಸಂಶೋಧನೆಯು ಅಧ್ಯಯನದ ಭಾಗವಾದರೆ, ಅಂತಹ ಸ್ನಾತಕ ಹಾನರ್ಸ್ ಪದವೀಧರರು ನೇರವಾಗಿ ಡಾಕ್ಟರೇಟ್ (Ph.D) ಪದವಿ ಅಧ್ಯಯನಕ್ಕೆ ಸೇರಲು ಅರ್ಹರು. ಒಂದು ವೇಳೆ ವಿದ್ಯಾರ್ಥಿಯು ಅಧ್ಯಯನ ಮಾಡುತ್ತಿರುವ ಮಹಾವಿದ್ಯಾಲಯದಲ್ಲಿ ಸ್ನಾತಕ ಹಾನರ್ಸ್ ಪದವಿ ತರಗತಿ ಲಭ್ಯವಿಲ್ಲದಿದ್ದರೆ, ವಿದ್ಯಾರ್ಥಿಯು ನಾಲ್ಕನೇ ವರ್ಷದ ಸ್ನಾತಕ ಹಾನರ್ಸ್ ಪದವಿಗೆ ಬೇರೊಂದು ಮಹಾವಿದ್ಯಾಲಯ ಸೇರಲು ಅವಕಾಶವಿದೆ.
B.C.A, B.B.A ಮತ್ತು B.Com ತರಗತಿಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಬಹುತೇಕ ಇದೇ ವ್ಯವಸ್ಥೆಯಿದ್ದು ಅವರಿಗೆ ಮೂರು ವಿಷಯಗಳು ಡಿಸಿಪ್ಲಿನ್ ಕೋರ್ ಆಗಿರುತ್ತವೆ ಮತ್ತು ಈ ವಿಷಯಗಳು ಪೂರ್ವ ನಿರ್ಧರಿತವಾಗಿರುತ್ತವೆ.
*ನೂತನ ವ್ಯವಸ್ಥೆ ಕಲಿಕಾ ವ್ಯವಸ್ಥೆಯ ಮೇಲೆ ಯಾವ ಪರಿಣಾಮ ಬೀರಬಹುದು?*
ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆಯೊಂದು ವರದಾನವಾಗಲಿದ್ದು ಅವರು ಸಾಕಷ್ಟು ಜಾಗರೂಕತೆಯಿಂದ ತಮಗೆ ಆಸಕ್ತಿಯಿರುವ ಡಿಸಿಪ್ಲಿನ್ ಕೋರ್ ಮತ್ತು ಉಪಯುಕ್ತ ಓಪನ್ ಇಲೆಕ್ಟಿವ್ ಆಯ್ದುಕೊಂಡರೆ ಅವರು ಉದ್ದೇಶಿತ ವಿಷಯದಲ್ಲಿ ಪದವಿಯಾಗಲೀ ಆನರ್ಸ್ ಆಗಲೀ ಪಡೆದು ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ಈ ದೃಷ್ಟಿಯಿಂದ ವಿದ್ಯಾರ್ಥಿಗಳು ಕೋರ್ಸುಗಳನ್ನು ಆಯ್ಕೆ ಮಾಡುವಾಗ ಸಾಕಷ್ಟು ಮುಂದಾಲೋಚನೆ ಮಾಡಿಕೊಳ್ಳುವುದು ಅಗತ್ಯ. ಒಂದು ವಿಷಯವನ್ನು ಕಲಿಯಲು ಸುಲಭ ಅಥವಾ ಅಂಕಗಳಿಸುವುದು ಸುಲಭವೆಂಬ ಕಾರಣದಿಂದ ಆ ವಿಷಯವನ್ನು ಆಯ್ಕೆ ಮಾಡಿಕೊಂಡರೆ ಮುಂದಿನ ಹಂತದಲ್ಲಿ ತೊಂದರೆಗೊಳಗಾಗಬುದಾದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಹೇಗಿದ್ದರೂ ನೂತನ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ತಮಗಿಷ್ಟ ಬಂದ ವಿಷಯಗಳನ್ನು ಆಯ್ಕೆ ಮಾಡಲು ಅವಕಾಶವಿರುವುದರಿಂದ ಕೆಲವೊಂದು ವಿಷಯಗಳಿಗೆ ಬೇಡಿಕೆ ಕಡಮೆಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಇದಲ್ಲದೆ ಕನ್ನಡ, ಶಾರೀರಿಕ ಶಿಕ್ಷಣ, ಡಿಜಿಟಲ್ ಫ್ಲುಯೆನ್ಸಿ ಮೊದಲಾದ ವಿಷಯಗಳನ್ನು ಕಡ್ಡಾಯಗೊಳಿಸಿದುರರಿಂದ ಆ ವಿಷಯಗಳ ಬೋಧಿಸುವ ಉಪನ್ಯಾಸಕರಿಗೆ ಬೇಡಿಕೆ ಜಾಸ್ತಿಯಾಗಬಹುದು. ಕರ್ನಾಟಕ ಉನ್ನತ ಶಿಕ್ಷಣ ಆಯೋಗವು ಇದಕ್ಕೆ ಬೇಕಾದ ಎಲ್ಲ ಪೂರ್ವತಯಾರಿಗಳನ್ನೂ ಸಮರ್ಥವಾಗಿ ಸಿದ್ದಪಡಿಸಿದುದರಿಂದ ಯಾವುದೇ ಸಮಸ್ಯೆಗಳಿಲ್ಲದೆ ಇದೇ ಶೈಕ್ಷಣಿಕ ವರ್ಷದಿಂದ ನೂತನ ನೀತಿಯಂತೆ ಪ್ರಥಮ ಪದವಿಯ ತರಗತಿಗಳು ಸಂಪನ್ನಗೊಳ್ಳಬಹುದೆಂದು ನಿರೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಬಹುದಾದ ಇನ್ನೂ ನೂತನವಾದ ಕೋರ್ಸುಗಳನ್ನು ನೀಡುವುದರಿಂದ ಪದವಿ ಶಿಕ್ಷಣಕ್ಕೆ ಅತ್ಯಧಿಕ ವಿದ್ಯಾರ್ಥಿಗಳನ್ನು ಆಕರ್ಷಿಸಬಹುದು.
ಡಾ. ನಾರಾಯಣ ಭಟ್ ಯಂ
ಸಂತ ಎಲೋಶಿಯಸ್ ಕಾಲೇಜು
ಮಂಗಳೂರು
0 Comments